ತಿರುತ್ತಣಿ
ಪುಣ್ಯಕ್ಷೇತ್ರ.  ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿದೆ.  ತಮಿಳುನಾಡಿನ ಚಿಂಗಲ್‍ಪಟ್ ಜಿಲ್ಲೆಯಲ್ಲಿರುವ ಈ ಸ್ಥಳ ಮದ್ರಾಸು ನಗರದಿಂದ ರೇಣಗುಂಟೆಗೆ ಹೋಗುವ ರೈಲು ಮಾರ್ಗದ ಹೆದ್ದಾರಿಯಲ್ಲಿ ಒಂದು ಕಿರುಬೆಟ್ಟದ  ಮೇಲಿದೆ. ಸಂಪ್ರದಾಯದ ಪ್ರಕಾರ, ಸುಬ್ರಹ್ಮಣ್ಯಸ್ವಾಮಿ ಶೂರಪದ್ಮ ಮೊದಲಾದ ರಾಕ್ಷಸರನ್ನು ಸೆದೆ ಬಡಿದ ಮೇಲೆ, ಇಲ್ಲಿಗೆ ಒಂದು ಶಾಂತಿಯನ್ನು ಪಡೆದನೆಂದು ತಿಳಿದುಬರುತ್ತದೆ.  ಇದಕ್ಕೆ ಸ್ಕಂದಾಚಲ, ಉತ್ಪಲಗಿರಿ, ಕಲ್ಹಾರಗಿರಿ, ಚೆಂಗಬ್ರಗಿರಿ, ಶ್ರೀಪರಿಪೂರ್ಣಗಿರಿ ಮತ್ತು ನೀಲಗಿರಿ ಎಂಬ ಹೆಸರುಗಳೂ ಇವೆ.  ಇದರ ಬಗೆಗೆ ಅನೇಕ ಕಥೆಗಳನ್ನು ಸ್ಕಂದಪುರಾಣ ಹಾಗೂ ತಣಗೈಪುರಾಣಗಳಲ್ಲಿ ವಿವರಿಸಲಾಗಿದೆ. ಈ ಕಥೆಗಳಲ್ಲಿ ಸುಬ್ರಹ್ಮಣ್ಯಸ್ವಾಮಿ ಅಗಸ್ತ್ಯ ಮಹರ್ಷಿಗೆ ತಮಿಳುಭಾಷೆಯನ್ನು ಕಲಿಸಿದುದು, ಇಂದ್ರ ಸುಬ್ರಹ್ಮಣ್ಯಸ್ವಾಮಿಯ ಪೂಜೆಗೋಸ್ಕರ ಪುಷ್ಕರಣಿಯೊಂದನ್ನು ನಿರ್ಮಿಸಿದುದು, ಗಣ ಪತಿ ತನ್ನ ಸೋದರ ಸುಬ್ರಹ್ಮಣ್ಯ ವಲ್ಲಿಯೊಂದಿಗೆ ಮದುವೆಯಾಗಲು ಸಹಾಯ ಮಾಡಿದುದು- ಇವು ಗಮನಾರ್ಹವಾದುವು.  ಸುಬ್ರಹ್ಮಣ್ಯನ ವಿವಾಹಕ್ಕೆ ನೆರವಾದ ಗಣಪತಿಗೆ ಇಲ್ಲಿ ವಿಶೇಷ ಪೂಜೆ ಸಲ್ಲುತ್ತದೆ.  ಈ ಬೆಟ್ಟಕ್ಕೆ ಹತ್ತಿರದಲ್ಲಿಯೆ  ವೆಳ್ಳಿಮಲೈ ಎಂಬ ಬೆಟ್ಟವಿದೆ.  ಇಲ್ಲಿಯೇ ಸುಬ್ರಹ್ಮಣ್ಯಸ್ವಾಮಿಯ ಮದುವೆಯಾಯಿತೆಂದು ಹೇಳಲಾಗುತ್ತದೆ.  ಪ್ರಾಚೀನ ಇತಿಹಾಸದ ದೃಷ್ಟಿಯಿಂದಲೂ ಈ ಸ್ಥಳಕ್ಕೆ ಮಹತ್ತ್ವವಿದೆ.  ಇಲ್ಲಿ ಪಲ್ಲವರ ಕಾಲದ ವಾಸ್ತುಶಿಲ್ಪವನ್ನು ಪ್ರತಿನಿಧಿಸುವ ವೀರಟ್ಟಾಣೇಶ್ವರಮ್ ಎಂಬ ಕಲ್ಲಿನಲ್ಲಿ ಕಟ್ಟಿದ ಶಿವಾಲಯವಿದೆ.  ಇದು ರೈಲ್ವೆ ರಸ್ತೆಗೆ ಪೂರ್ವದಲ್ಲಿದೆ.  ಕ್ರಿ. ಶ. 9ನೆಯ ಶತಮಾನದ ಉತ್ತರಾರ್ಧದಲ್ಲಿ ಆಳಿದ ಪಲ್ಲವರಾಜ ಅಪರಾಜಿತನ ಕಾಲಕ್ಕೆ ನಂಬಿ ಅಪ್ಪೈಎಂಬಾತ ಕಲ್ಲಿನಲ್ಲಿ ಈ ದೇವಸ್ಥಾನವನ್ನು ಕಟ್ಟಿಸಿದುದಾಗಿ ಇಲ್ಲಿನ ಶಾಸನವೊಂದರಿಂದ ತಿಳಿದುಬರುತ್ತದೆ.  ಗರ್ಭಗೃಹ ಅರ್ಧಚಂದ್ರಾಕೃತಿಯಲ್ಲಿದ್ದು ಅದರ ಹೊರಮೈಯಲ್ಲಿರುವ ಮಂಟಪಗಳಲ್ಲಿ ಗಣೇಶ, ದುರ್ಗಾ, ದಕ್ಷಿಣಾಮೂರ್ತಿ  ಮೊದಲಾದ ದೇವತೆಗಳ ಸುಂದರ ಮೂರ್ತಿಗಳಿವೆ.  ಈ ದೇವಸ್ಥಾನಕ್ಕೆ ಐತಿಹಾಸಿಕ ಮಹತ್ತ್ವವಿದೆ.  ಪಲ್ಲವರ ಕಾಲದ ತಮಿಳರ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು.  ಈ ಕ್ಷೇತ್ರವನ್ನು ಅರುಣಗಿರಿನಾಥ ಕಚ್ಛಿಯಪ್ಪಮುನಿ ಮೊದಲಾದವರು ತಮ್ಮ ಕೃತಿಗಳಲ್ಲಿ ಸ್ತುತಿಸಿದ್ದಾರೆ.				(ಪಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ